ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 55
ನೀನು ಎಪ್ಪತ್ತು ವರ್ಷದವರೆಗೆ ಬದುಕುತ್ತೀಯ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಒಮ್ಮೆ ಶಿವಮೊಗ್ಗದ ಭಕ್ತೆಯೊಬ್ಬರು ಖಾಯಿಲೆಗೆ ಒಳಗಾದರು. ಖಾಯಿಲೆ ಉಲ್ಬಣವಾಗುತ್ತಾ ಸಾಗಿತು. ಗುರುನಾಥರನ್ನು ಅನೇಕ ಸಾರಿ ಭೇಟಿ ಮಾಡಿದ್ದ ಇವರಿಗೆ ಕೂಡಲೇ ಅನಿಸಿದ್ದು ಗುರುನಾಥರನ್ನು ಕಾಣಬೇಕು. ಅವರ ಆಶೀರ್ವಾದ ಒಂದೇ ಎಲ್ಲಾ ಖಾಯಿಲೆಗೆ ರಾಮಬಾಣ ಎಂದೆನಿಸಿತಂತೆ.
ಈ ಮಧ್ಯದಲ್ಲಿ ಸಂಸಾರದ ವ್ಯಾಮೋಹ ಕಾಡತೊಡಗಿತ್ತು ಅವರಿಗೆ. ಸಣ್ಣ ಮಕ್ಕಳು ತಮ್ಮ ಯಜಮಾನರು, ಇಡೀ ಮನೆ ನನ್ನನ್ನು ನಂಬಿದೆ. ನಾನು ಈ ರೀತಿ ಒಂದು ವೇಳೆ ಅಕಾಲಿಕವಾಗಿ ಪ್ರಾಣ ಬಿಟ್ಟರೆ, ಮನೆಯ ಗತಿ ಏನು?, ಹೀಗೆ ಏನೇನೋ ಆಲೋಚನೆಗಳು ಬಂದವಂತೆ. ಇಲ್ಲಿ ಕಬೀರರ ಹಾಗೂ ಅವರ ತಾಯಿಯ ನಡುವೆ ನಡೆದ ಒಂದು ಘಟನೆ ಪ್ರಸ್ತುತವೆನಿಸುತ್ತದೆ.
ನಿರಂತರ ಬಟ್ಟೆ ನೇಯುವ ಕಬೀರನಿಗೆ ರಾಮನಾಮದ ಮಹಿಮೆಯ ಅರಿವಾಗುತ್ತಿದ್ದಂತೆ, ಬಟ್ಟೆ ನೇಯುವುದನ್ನು ಬಿಟ್ಟು ಸರ್ವ ಸಮರ್ಥನಾದ ರಾಮನಲ್ಲಿ ತಲ್ಲೀನವಾಗಿಬಿಟ್ಟನಂತೆ. ಇದನ್ನು ನೋಡಿದ ಅವನ ತಾಯಿ ನನ್ನ ಮಗ ಎಂತಹ ಕೆಲಸ ಮಾಡಿಬಿಟ್ಟ, ನಾನಿರುವವರಗೇನೋ ಇವನು ನನ್ನ ಮಗ ಎಂದು ನಾನು ಅನ್ನ ಹಾಕುತ್ತೇನೆ. ನನ್ನ ನಂತರ ಇವನಿಗಾರು ದಾತಾರರು ಎಂದು ಚಿಂತಿಸಿ, ಮಗನ ಬಳಿ ಬಂದು ತನ್ನ ಮನದ ಭಾವನೆಯನ್ನು ಆಡಿ ತೋರಿಸಿದಳು. ಅದಕ್ಕೆ ನಿಶ್ಚಲನಾಗಿ ಕಬೀರಾನಂದನಂತೆ: 'ಅಮ್ಮಾ ನಿನ್ನಿಂದಲೇ ನನ್ನ ಬದುಕು ಸಾಗುತ್ತಿದೆ ಎಂದೇಕೆ ಚಿಂತಿಸುತ್ತೀ. ಇದು ನಿಮ್ಮ ಮೂರ್ಖತನ. ಪ್ರಪಂಚದ ಕೋಟ್ಯಾನುಕೋಟಿ ಜೀವ ಜಂತುಗಳಿಗೆ ಅನ್ನ ನೀಡುವ ಸಮರ್ಥನವನಿದ್ದಾನೆ. ನನ್ನ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು, ಅವನನ್ನು ಧ್ಯಾನಿಸಿ ನಿಶ್ಚಿಂತಳಾಗು. ಇದರಿಂದ ನಿನ್ನ ಉದ್ಧಾರವೂ ಆಗುತ್ತದೆ'.
ಗುರುನಾಥರ ಬಳಿ ದುಗುಡದಿಂದ ಬಂಡ ಆ ಭಕ್ತೆ ನಮಿಸಿ ಕುಳಿತಾಗ, ಗುರುನಾಥರು ನಗುತ್ತಾ ಹೇಳಿದರಂತೆ: 'ನೀನೇನೂ ಸಾಯುವುದಿಲ್ಲ.. ಹೆದರಬೇಡ. ಎಪ್ಪತ್ತು ವರ್ಷಗಳವರಗೆ ನಿನಗೆ ಆಯಸ್ಸು ಇದೆ. ಖಂಡಿತಾ ಯೋಚನೆ ಮಾಡಬೇಡ. ಆ ಮುಂದಿನದನ್ನು ನಾನು ಹೇಳಲಾರೆ. 'ಗುರುನಾಥರು ಏನನ್ನೂ ಕೇಳದೆ ಭಕ್ತೆಯ ಮನದ ದುಗುಡವನ್ನು ಹೀಗೆ ದೂರೀಕರಿಸಿದರಂತೆ. ಇಂದೂ ಅವರು ಆರೋಗ್ಯವಾಗಿದ್ದಾರೆ. ಗುರುನಾಥರ ಸ್ಮರಣೆ ಅವರ ಜೀವನದ ಊರುಗೋಲಾಗಿದೆ'. ಯಾವುದೇ ರೀತಿಯ ಸಂಕಟದಲ್ಲಿ ಇದ್ದವರಿಗೂ ಗುರುನಾಥರು ನುಡಿಯುತ್ತಿದ್ದ ಇಂತಹ ಮಾನವೀಯ ಮಾತುಗಳು ಮರೆಯಲಾರದವು.
ಸನ್ಮಾನ್ಯ ನಿತ್ಯ ಸತ್ಸಂಗಾಭಿಮಾನಿ ಗುರು ಬಾಂಧವರೇ, ಗುರುವಿನ ಅನೇಕ ಮುಖಗಳ ಪರಿಚಯಿಸುವ ಈ ನಿತ್ಯ ಸತ್ಸಂಗ ನಿರಂತರ ಪ್ರವಹಿಸುವ ಗಂಗೆಯಾಗಿ ಎಲ್ಲರೂ ಅದರಲ್ಲಿ ಮಿಂದು ಪುನೀತರಾಗೋಣ... ನಾಳೆಯೂ ಬರುವಿರಲ್ಲಾ ಗಂಗಾ ಸ್ನಾನಕ್ಕೆ... ಖಂಡಿತಾ ಬನ್ನಿ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
No comments:
Post a Comment