ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 43
ಅದೆಷ್ಟು ಜನ್ಮದ ಪುಣ್ಯವೋ... ಅಣ್ಣನಾಗಿ ಬಂದರು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುಭಕ್ತೆಯೊಬ್ಬರಿಗೆ ಗುರುನಾಥರ ದರ್ಶನ ಮಾಡುವ ಆಸೆಯಾಗಿ, ಗುರುವಿಗೆ ಪ್ರಿಯವೆಂದು ಭಾವಿಸಿ, ಜಾಮೂನು, ಬೇರೆ ಬೇರೆ ಸಿಹಿ ತಿಂಡಿಗಳನ್ನೆಲ್ಲಾ ಮಾಡಿಕೊಂಡು ಗುರುನಾಥರ ಬಳಿ ಹೋಗಿದ್ದರಂತೆ. ಎಲ್ಲವನ್ನೂ ತ್ಯಜಿಸಿರುವ ಗುರುನಾಥರಿಗೆ ಆ ತಿಂಡಿ ಇಷ್ಟ ಎಂದು ತಂದು ಕೊಡುವ ಭಕ್ತರಿಗೆ ಏನನ್ನಬೇಕು. ಆದರೆ ಭಕ್ತ ಪ್ರೇಮಿಯಾದ ಗುರುನಾಥರು ಶಿಷ್ಯರಿಗೆ ಮನ ನೋಯಿಸಬಾರದೆಂದು ಅವರು ಪ್ರೀತಿಯಿಂದ ತಂಡ ತಿಂಡಿಗಳನ್ನು ಒಂದು ಚೂರೂ ಸ್ವೀಕರಿಸಿದರೆ ಭಕ್ತರಿಗೆ ಅದೇ ಮಹತ್ತು. ಗುರುನಾಥರು ನಾನು ತಂದ ತಿಂಡಿ ತೀರ್ಥ ಸ್ವೀಕರಿಸಿದರು, ನನ್ನ ಜನ್ಮ ಸಾರ್ಥಕವಾಯಿತೆಂದು ಕೆಲ ಭಕ್ತರು ಸಂತಸಪಟ್ಟರೆ ಇನ್ನೂ ಕೆಲ ಭಕ್ತರು ಇನ್ನೂ ಮುಂದುವರೆದು ಗುರುನಾಥರು ನಾನು ತಂಡ ಸಿಹಿಯನ್ನು ತಿಂದರೆಂದು ಸಂಭ್ರಮಿಸುವುದೂ ಇದೆ. ಜಗತ್ತಿಗೆ ಸಿಹಿ ಉಣಿಸಲೆಂದೇ ಜನಿಸಿದ ಗುರುನಾಥರಿಗೆ ನಾವೆಷ್ಟು ಕೊಟ್ಟೇವು.
ಆ ಭಕ್ತೆ ಸಿಹಿ ನೀಡಲು, ನಮಸ್ಕರಿಸಿ ಕೊಡಲು ಹೋದಾಗ ಏಕೋ ವಿಹ್ವಲರಾದಂತೆ ಕಂಡು ಬರುವ ಗುರುನಾಥರು "ತಡೆಯಮ್ಮಾ ಸ್ವಲ್ಪ.... ಶಂಕರಾನಂದರು ಅದೇಕೋ ನನ್ನನ್ನು ಕರೀತಿದ್ದಾರೆ. ಗುರುನಾಥ... ಗುರುನಾಥರಂದು ಆಕ್ಸಿಡೆಂಟ್ ಗೆ ಸಿಲುಕಿ ಹೋಗಿ ಬಿಟ್ಟರಲ್ಲಮ್ಮ" ಎಂದರಂತೆ ಕಂಚಿನಾಳದ ಅವಧೂತರಾದ ಶ್ರೀ ಪರ್ವತೇಶ್ವರ ಸ್ವಾಮಿಗಳ ಪರಮ ಭಕ್ತರೂ, ನಿಷ್ಠರೂ ಆದ ಯುವ ಸನ್ಯಾಸಿಗಳಾದ ಶಂಕರಾನಂದರು, ಬಹು ಜನಪ್ರಿಯರು. ಹುಬ್ಬಳ್ಳಿಯ ಸನಿಹ ಈ ಘಟನೆ ಸಂಭವಿಸಿದ ಕ್ಷಣದಲ್ಲಿ ಗುರುನಾಥರು ಮನೆಯಲ್ಲೇ ಕುಳಿತು ಎಲ್ಲರಿಗೆ ತಿಳಿಸುವಂತೆ ಈ ಮಾತುಗಳನ್ನು ಆಡಿದರಂತೆ. ಆದರೆ ಅಲ್ಲಿ ಬಂದಿದ್ದ ಗುರುಭಕ್ತೆಗೆ ಶಂಕರಾನಂದ ಗುರುಗಳು ಪೂರ್ವ ಆಶ್ರಮದ ನಿಕಟ ಸಂಬಂಧಿಗಳಂತೆ ಆ ಭಕ್ತೆ ಗಾಭರಿಯಾದರಂತೆ. ಹೀಗೆ ಗುರುನಾಥರು ಇದ್ದಲ್ಲಿಂದಲೇ ಮತ್ತೆಲ್ಲೋ ಆದ ಘಟನೆಗಳನ್ನು ಕಂಡು ಮಾತನಾಡುತ್ತಿದ್ದುದಿದೆ.
ಮತ್ತೊಂದು ಸಾರಿ ತೋಟದ ಕೆಲಸಕ್ಕೆ ಹೋಗಿದ್ದ ಆಳು ಗುರುನಾಥರಲ್ಲಿ ಬಂದು ಅಯ್ಯ ಕೆಲಸ ಎಲ್ಲಾ ಆಯ್ತು ಎಂದು ಕೂಲಿ ಕೇಳಿದಾಗ, ಅವನು ಕೇಳಿದ್ದಕ್ಕಿಂತ ಜಾಸ್ತಿ ನೀಡಿದ ಗುರುನಾಥರು ಏನಯ್ಯಾ, ಎಲ್ಲಾ ಮರಗಳ ಕೆಲಸವೂ ಆಯಿತೇ? ಎಂದು ಕೇಳಿದಾಗ ಕೆಲಸದವನು ಎಲ್ಲಾ ಆಯಿತೋ ಬುದ್ಧಿ ಎಂದು ಬಿಟ್ಟ. ಆಗ ಗುರುನಾಥರು 'ಕಡೇ ಪಟ್ಟೆಯ ನಾಲ್ಕೈದು ಗಿಡಗಳು ಹಾಗೆಯೇ ಇವೆ. ಮತ್ತೊಂದು ಸಾಲಿನಲ್ಲಿ ಕೆಲವು ಉಳಿದಿವೆಯಲ್ಲಾ' ಎಂದು ಕರಾರುವಕ್ಕಾಗಿ ಕೇಳಿದಾಗ, ಹೌದು ಬುದ್ಧಿ ವಸಿ ಉಳಿದಿವೆ. ಟೇಮ್ ಆಯಿತು. ನಾಳೆ ಬಂದು ಮಾಡಿಕೊಡ್ತೀನಿ ಅಂದಿದ್ದನಂತೆ. ಮತ್ತೊಮ್ಮೆ ಗುರುನಾಥರು ಅದ್ಯಾರಿಗೋ ತಲುಪಿಸಲು ಹೂವನ್ನು ಪೊಟ್ಟಣಗಳಲ್ಲಿ ಕಟ್ಟಿಸಿಟ್ಟಿದ್ದರಂತೆ. ಆದರೆ ಅದು ಏಳು ದಿನಗಳ ನಂತರ ಯಾರಿಗೆ ತಲುಪಬೇಕೋ ಅವರಿಗೆ ನೀಡಿದರು. ಪೊಟ್ಟಣ ಬಿಚ್ಚಿ ನೋಡಿದರೆ ಈಗ ಕೊಯ್ದು ತಂದ ಹೂವಿನಂತೆ ನಳನಳಿಸುತ್ತಿದ್ದವಂತೆ. ಪ್ರಕೃತಿಯ ಮೇಲೂ ಗುರುನಾಥರ ಹಿಡಿತವಿತ್ತೇ? ಸಂಕಲ್ಪ ಮಾತ್ರದಿಂದ ಎಲ್ಲ ಸಾಧಿಸುತ್ತಿದ್ದ ಗುರುನಾಥರಿಗೆ ಯಾವುದೂ ಕಷ್ಟವಿಲ್ಲ ಅಲ್ಲವಾ?.
ಗುರುನಾಥರು ಶಿಷ್ಯರನ್ನು ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ತಮ್ಮ ಬಂಧು ಬಾಂಧವರು, ಮನೆಯವರು, ಅಕ್ಕ ತಂಗಿಯರ ಬಗ್ಗೆಯೂ ಕಾಳಜಿ ವಹಿಸಿದ್ದರಂತೆ. ಅಣ್ಣನಾಗಿಯೂ ಗುರುವಾಗಿಯೂ ತಾವು ಪದೇ ಪದೇ ಹೋದರೆ, ತಮ್ಮ ಜೊತೆ ಬರುವ ಭಕ್ತ ಸಮೂಹದಿಂದ ಅವರಿಗೇನಾದರೂ ಹೊರೆ ಎನಿಸಿದರೆ, ಎಂಬ ಭಾವವೋ ಮತ್ತೇನೋ? ಕೆಲವೊಮ್ಮೆ ಇತ್ತ ಬಂದ ಭಕ್ತರಿಗೆ ತಮ್ಮ ಬಂಧುಗಳ ಮನೆಗೆ ಹೋಗಿ ಬರಲು ತಿಳಿಸುತ್ತಿದ್ದರು. ಆ ಭಕ್ತರು ಗುರುನಾಥರ ಸಂಬಂಧಿಕರ ಮನೆಗೆ ಬಂದಾಗ ಗುರುನಾಥರಿಗೆ ಸಿಗುವ ಮರ್ಯಾದೆ ಗೌರವಗಳೇ ಬಂದವರಿಗೂ ಸಿಗುತ್ತಿತ್ತು. ಕಳಿಸಿದವರು ಎಲ್ಲಾದರೂ ಸಂಕೋಚದಿಂದ ಹೋಗದೇ ಬಂದು ಬಿಟ್ಟರೆ, ಅಥವಾ ಹೋಗಬೇಕಾದ ಮನೆಯಿಂದ ಮುಂದೆ ಬಹುದೂರ ಹೋಗಿ ಬಿಟ್ಟಿದ್ದರೆ, ಅದು ಹೇಗೆ ಗುರುನಾಥರಿಗೆ ಗೊತ್ತಾಗಿ ಬಿಡುತ್ತಿತ್ತೋ? ಕೂಡಲೇ ಫೋನು ಮಾಡಿ ಎನ್ರಯ್ಯಾ, ಅಲ್ಲಿಗೆ ಹೋಗಲಿಲ್ಲವೇ? ಹಾಗಾದರೆ ನಾನು ನಿಮಗೆ ಹೇಳಿ ಏನು ಪ್ರಯೋಜನ ಹೇಳಿ? ಎಂದು ನೇರವಾಗಿ ಕೇಳಿದಾಗ ಮುಂದೆ ಹೋದ ಆ ಜನ ಮತ್ತೆ ಹಿಂದೆ ಬಂದು ಬಂಧುಗಳ ಮನೆಯಲ್ಲಿ ಅವರ ಸತ್ಕಾರ ಸ್ವೀಕರಿಸಿ, ಕಥೆ ಹೀಗಾಯಿತು ಎಂದು ತಿಳಿಸಿ ನಂತರ ಹೋಗುತ್ತಿದ್ದುದನ್ನು ಗುರುನಾಥರ ಭಾವನವರು ಸ್ಮರಿಸುತ್ತಾರೆ.
ಗುರುನಾಥರು ತಮ್ಮ ಬಂಧುಗಳ ಮನೆಗೆ ಹೋದಾಗಲೆಲ್ಲಾ (ತಂಗಿಯರ ಮನೆ) ಗುರುನಾಥರ ದಂಡೇ ಇರುತ್ತಿತ್ತು. ಎಲ್ಲರಿಗೂ ಒಂದು ರೀತಿಯ ಆದರ ಆತಿಥ್ಯಗಳು ಆಗಬೇಕು, ಆಗುತ್ತದೆಂಬ ಭರವಸೆಯಿಂದಲೇ ಕರೆತರುತ್ತಿದ್ದರಂತೆ. ಕೆಲವೊಮ್ಮೆ ಇಷ್ಟು ಜನಕ್ಕೆ ಅಡುಗೆ ಮಾಡಿ ಎಂದು ಮಾಡಿಸಿ ನಮ್ಮಣ್ಣ ಎಲ್ಲೋ ಹೋಗಿ ಬಿಡುತ್ತಿದ್ದರು. ಬಂದವರಿಗೆಲ್ಲಾ ಸಮಾರಾಧನೆಯಾಗುತಿತ್ತು ಅವರ ಅನುಪಸ್ಥಿತಿಯಲ್ಲಿಯೂ' ಎನ್ನುತ್ತಾರೆ ಗುರುನಾಥರ ತಂಗಿ.
ಅಣ್ಣನೆಂದರೆ ತಂದೆ ಎನ್ನುತ್ತಾರೆ. ನಮ್ಮಿಂದ ಒಂದು ಸಣ್ಣ ತಪ್ಪೂ ಆಗದಂತೆ ಎಚ್ಚರ ವಹಿಸಿ, ತಮ್ಮ ಕಣ್ಣಿನ ರೆಪ್ಪೆಯಲ್ಲಿ ಇಟ್ಟುಕೊಂಡು ಕಾಪಾಡಿದ. ಆ ವಿಶ್ವ ಗುರುವಿನ ರಕ್ತ ಹಂಚಿಕೊಂಡು ನಾವು ಜನಿಸಿರುವುದೇ ಅದೆಷ್ಟು ಜನ್ಮದ ಪುಣ್ಯವೋ?' ಎನ್ನುತ್ತಾರೆ ಧನ್ಯತಾ ಭಾವದಿಂದ ಗುರುನಾಥರ ಪ್ರಿಯ ಶಿಷ್ಯೆ ಸಹೋದರಿಯೊಬ್ಬರು ಗುರುನಾಥರ ಲೀಲೆಯ ಒಳ ಹೊರಗೆಲ್ಲಾ ಅದೇ ಸತ್ಯ ಸಾಧನೆ ಅದೇ ಸನ್ಮಾರ್ಗ ದರ್ಶನ, ಅದೇ ಕಠಿಣ.. ಸಾಧನೆ.
ನಿತ್ಯ ಸತ್ಸಂಗಾಭಿಮಾನಿಗಳೇ, ಇಂತಹ ಸೇವಾ ಅವಕಾಶ ಸಿಗುವುದೂ ಸುಲಭವಲ್ಲ ಅಲ್ಲವೇ... ನಾಳೆಯೂ ಮತ್ತೆ ನಮ್ಮೊಂದಿಗೆ ಇರುವಿರಲ್ಲಾ.....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
No comments:
Post a Comment