ಒಟ್ಟು ನೋಟಗಳು

Thursday, July 6, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 36
ಮಾಂಗಲ್ಯಂ ತಂತುನಾನೇನ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ಗುರುಭಕ್ತರಾದವರಿಗೆ, ಆ ಮಾರ್ಗದಲ್ಲಿ ನಡೆಯುವವರಿಗೆ ಗುರುವೆಂದರೇನು? ಗುರುವಾಕ್ಯದ ಪ್ರಭಾವವೇನೆಂಬುದು ಅರಿವಿಗೆ ಬಂದಿರುತ್ತೆ. ಮೊದಲೇ ಶಂಕರಲಿಂಗ ಭಗವಾನರ ಪರಮಶಿಷ್ಯರಾದ ಶ್ರೀಧರ ಮೂರ್ತಿಯವರು ಗುರುನಾಥರ ಮಾತನ್ನು ಕೇಳಿ ಹೌಹಾರಲಿಲ್ಲ. ಅದರ ಬದಲು ಸಾಕ್ಷಾತ್ ಸದ್ಗುರುವೇ ನನ್ನೆಲ್ಲಾ ಜವಾಬ್ದಾರಿಯನ್ನು ಹೊರುತ್ತೇನೆಂದು ಕೇಳಿದಾಗ ಇದಕ್ಕಿಂತ ಮಹತ್ ಭಾಗ್ಯ ಇನ್ನೇನಿದೆ. ಅಣ್ಣ ತಮ್ಮಂದಿರಿಲ್ಲ. ಬಂಧು ಬಳಗವಿಲ್ಲ. ಆದರೇನು ಗುರುಭಕ್ತರಿಗೆ ಗುರುಬಂಧುಗಳಿಗಿಂತ ಹೆಚ್ಚಿನ ಸಂಬಂಧವಾವುದೂ ಇಲ್ಲ. ಮಗಳ ಮದುವೆಯಂತಹ ಮಹತ್ಕಾರ್ಯ ಇದಾದರೂ ನಿಶ್ಚಿಂತೆಯಿಂದ ಅವರಾಡಿದ ಮಾತುಗಳನ್ನು ನೋಡಿ, ಅವರ ನಿರ್ಧಾರ ನೋಡಿ, ಗುರುಪ್ರಿಯರೇ. 

"ನೀವು ಪರಬ್ರಹ್ಮ ಸ್ವರೂಪಿಗಳು. ಗುರುನಾಥರೇ ನಾನು ಏನು ಹೇಳಲಿ? ನೀವು ಹೇಳಿದ್ದೇ ಪರಮ ವೇದ ವಾಕ್ಯ. ನಿಮ್ಮಿಚ್ಛೆಯಂತೆಯೇ ಆಗಲಿ, ನೀವು ಹೇಳಿದಂತೆಯೇ ನಾನು ಕೇಳುತ್ತೇನೆ ಅಂದು ಬಿಟ್ಟೆ. ಒಂದಿಪ್ಪತ್ತು ಜನ ವೇದ ವಿಶಾರದರೂ, ಘನಪಾಠಿಗಳೂ ಅಲ್ಲಿದ್ದರು. ಗುರುನಾಥರು ಗಂಡಿನವರನ್ನು 'ತಾಳಿ ತಂದಿದೀರಾ' ಎಂದು ಕೇಳಿದಾಗ 'ಇಲ್ಲ ಅವರ ಅಕ್ಕಂದಿರು ದುಬಾಯಿಯಲ್ಲಿ ತಾಳಿ ಮಾಡಿಸಿ ತರುತ್ತಾರೆ' ಎಂದರು ಗಂಡಿನವರು. ಒಂದು ಅರಿಶಿನ ಕೊಂಬು, ಒಂದು ಅರಿಶಿನದ ದಾರ ತನ್ನಿ' ಎಂದ ಗುರುನಾಥರು ಘನಪಾಠಿಗಳನ್ನು ಕರೆದು 'ಈ ಹುಡುಗಿ, ಇವರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಅರುಂಧತಿ ನಕ್ಷತ್ರ ತೋರಿಸಿಕೊಂಡು ಬನ್ನಿ' ಎಂದರು. ಅಲ್ಲೇ ಇದ್ದವರು ಹೊಸ ಬಟ್ಟೆಗಳನ್ನು ತಂದು ವಧೂ ವರರನ್ನು ಅಲಂಕರಿಸಿದರು. ಗುರುಬಂಧುಗಳ ಮನೆಯ ಸಂಭ್ರಮ ಪೂಜೆಯ ವಾತಾವರಣವೇ ಮದುವೆ ಮನೆಯ ವಾತಾವರಣವಾಯ್ತು. ಗುರುನಾಥರ ಸಮ್ಮುಖದಲ್ಲಿ ಹುಡುಗ ಹುಡುಗಿಗೆ ಅರಿಶಿನ ಕೊಂಬಿನ ತಾಳಿಯನ್ನು ಕಟ್ಟಿದ. ಗುರುನಾಥರ ಸಹಿತ ಅನೇಕ ಗುರು ಬಂಧುಗಳು ಮದುಮಕ್ಕಳನ್ನು ಹರಸಿದರು. "ಭೂಮಕ್ಕೆ ಸಿದ್ಧತೆ ಮಾಡಿ" ಎಂದು ಅಲ್ಲಿದ್ದವರಿಗೆ ಗುರುಗಳು ಹೇಳಿದಾಗ, ಎಲ್ಲಾ ಪ್ರೋಕ್ತ ಸಿದ್ಧತೆಗಳಾದವು. ಸಾಮಾನ್ಯ, ಅದ್ಧೂರಿಯ ಮದುವೆಗಳಲ್ಲಿ ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಸಿಹಿ ತಿನ್ನಿಸಿದರೆ, ಈ ವಿಶೇಷ ಮದುವೆಯ ವಿಶೇಷವೆಂದರೆ ಗುರುನಾಥರೇ ಪ್ರೀತಿಯಿಂದ ಮದುಮಕ್ಕಳಿಗೆ ತಮ್ಮ ಕೈಯಾರೆ ಸಿಹಿಯನ್ನು ತಿನ್ನಿಸಿದರು. ಎಂತಹ ಸೌಭಾಗ್ಯ ಈ ಮದು ಮಕ್ಕಳದು. ಅದಕ್ಕಿಂತ ದೊಡ್ಡ ಸೌಭಾಗ್ಯ ನಮ್ಮದು ಅದಕ್ಕಿಂತ ಮೀರಿದ ಆನಂದ ಅಲ್ಲಿ ನೆರೆದ ಭಕ್ತ ವೃಂದಕ್ಕೆ ಒದಗಿತ್ತು. ಗುರುನಾಥರ ಲೀಲೆಯ ಬಗ್ಗೆ ಅರಿತಿದ್ದ ಅವರ ಭಕ್ತ ವೃಂದಕ್ಕೆ ಇದೊಂದು ಸಹಜ ಲೀಲಾವತಾರಣವಾಗಿತ್ತು. ಗುರು ಕರುಣೆಯ ಅಗಾಧ ಅನುಭವ ಉಂಡ ನಾನು ದಿಂಗ್ಮೂಢನಾಗಿದ್ದೆ" ಮಾತು ನಿಂತು ಆನಂದದ ಮೌನ ರಾಜ್ಯಭಾರ ಮಾಡುತ್ತಿತ್ತು. ಒಂದು ಕ್ಷಣ ಶ್ರೀಧರ ಮೂರ್ತಿಗಳು ಆನಂದದ ಅನುಭವದಲ್ಲಿದ್ದರು. 

ಧಾರೆ ಸೀರೆ ಇಲ್ಲ, ತಾಳಿ ಇಲ್ಲ, ಸೂಟು ಬೂಟುಗಳಿಲ್ಲ, ವಾದ್ಯ ಬಾಜಾ ಭಜಂತ್ರಿಗಳಿಲ್ಲ, ಛತ್ರದ ಗೋಜಿಲ್ಲ, ಹಲವು ಸಂಬಂಧಿಗಳಿಲ್ಲ, ಬೀಗರೂಟದ ಬೀಗುವಿಕೆ ಇಲ್ಲ. ಹೆಣ್ಣಿನವರಾಗಿ ಕೈಕಟ್ಟಿ ಸೊಂಟ ಬಾಗಿ ನಿಲ್ಲುವವರಿಲ್ಲ... ಆದರೆ ಇದಕ್ಕೆಲ್ಲಕ್ಕಿಂತ ಮಿಗಿಲಾಗಿ ಇದ್ದುದು ಒಂದೇ ಒಂದು. ಗುರುನಾಥರ ಸಂಪೂರ್ಣ ಕೃಪಾಶೀರ್ವಾದ ಮಾತ್ರ ಒದಗಿಬಂದಿತ್ತು. ಎಲ್ಲಾ ಸುಸೂತ್ರವಾಗಿ ಹೂವಿನ ಸರವೆತ್ತಿದಂತೆ ನಡೆದಿತ್ತು. ಮುಹೂರ್ತ ಕೇಳಲು ಬಂದವರು ಮದುವೆ ಮುಗಿಸಿಕೊಂಡು ಧನ್ಯರಾಗಿದ್ದರು. 

ಮುಂದೆ ಶ್ರೀಧರಮೂರ್ತಿಯವರು ಭಕ್ತರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ಗುರುನಾಥರು, ಮೂರ್ತಿಯವರಿಗೆ ನಮಸ್ಕರಿಸಿದಾಗ ವಿಭ್ರಾಂತರಾದ ಮೂರ್ತಿಯವರು 'ಪರಮಾತ್ಮಾ ಇದೇನು ನೀವು ನನಗೆ ನಮಸ್ಕರಿಸುವುದಾ?' ಎಂದು ಮತ್ತೆ ಗುರುನಾಥರ ಚರಣ ಹಿಡಿದರು. ಗುರುನಾಥರ ಚರಣಕಮಲಗಳ ಮೇಲೆ ಆನಂದಬಾಷ್ಪಗರೆದರು. ಮಹಾನ್ ಗುರುನಾಥರ ಸರಳಾತಿಸರಳ ರೀತಿಗೆ ಅವರು ಅವರ ಪ್ರೀತಿಗೆ ಶ್ರೀಧರಮೂರ್ತಿಗಳು ಸ್ಥಂಭೀತರಾಗಿದ್ದರು. 

ಪ್ರಿಯ ನಿತ್ಯ ಸತ್ಸಂಗ ಪ್ರೇಮಿ ಗುರುನಾಥ ಭಕ್ತರೇ.... ಗುರುಕೃಪೆಯ ವಿಶೇಷ ಅದೆಷ್ಟು ವಿಚಿತ್ರವಾಗಿದೆ ನೋಡಿ. ಗುರುನಾಥರ ಲೀಲೆಯ ಅಪಾರತೆಗೆ ಕೊನೆ ಮೊದಲು ಎಲ್ಲಿ? ಗುರುನಾಥರ ಸಹಸ್ರಾರು ಭಕ್ತರ ಹೃದಯದಲ್ಲಿ ಅಡಗಿದ ಈ ಸತ್ಕಥೆಗಳು ನಮಗೆ ಸಿಗುತ್ತಲೇ ಇರಲೆಂದು ಪ್ರಾರ್ಥಿಸೋಣ. ಮತ್ತೆ ನಾಳೆಯೂ ಬನ್ನಿ ನಿತ್ಯ ಸತ್ಸಂಗಕ್ಕೆ. ಬರಲೇ... ತಪ್ಪದೆ ಬನ್ನಿ. 
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment