ಒಟ್ಟು ನೋಟಗಳು

Monday, July 24, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 54
ಹೊಸ ಮನೆ ಸಿಗುತ್ತೆ ಹೋಗಯ್ಯ



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

'ಗುರುನಾಥರ ಬಳಿಗೆ ಆಗಾಗ್ಗೆ ಹೋಗಿ ಬರುತ್ತಿದ್ದೆ. ಅದರಲ್ಲಿ ಏನೋ ಒಂದು ನೆಮ್ಮದಿ ನನಗೆ ಕಂಡು ಬರುತ್ತಿತ್ತು. ನಮ್ಮ ತಂದೆಯವರು ಗತಿಸಿದ ವಿಚಾರವನ್ನು ನಾಯಿಯೊಂದು ಪ್ರದಕ್ಷಿಣೆ ಹಾಕಿ ಹೋದ ವಿಚಾರವನ್ನು ಗುರುನಾಥರಿಗೆ ತಿಳಿಸಿದಾಗ ಅವರು ನಿರ್ಲಿಪ್ತರಾಗಿದ್ದರು. ಎಲ್ಲವೂ ಅವರಿಗೆ ಅರಿತಿದ್ದೇ ಆಗಿತ್ತು. ಹುಟ್ಟು ಸಾವುಗಳ ಭವ ಬಂಧನ ದಾಟಿದವರಿಗೆ ಅವು ಅಚ್ಚರಿ ತರಲಾರವೇನೋ. ಮುಂದೆ ಗುರುನಾಥರ ಕರುಣೆಯಿಂದ ನನ್ನ ವ್ಯವಹಾರಗಳನ್ನು ತೀರಿಸಿಕೊಂಡು ಬೆಂಗಳೂರಿಗೆ ಹೋಗಿ ಬರುವುದು ಶುರುವಾಯಿತು. ಪೂರ್ತಿಯಾಗಿ ಅಲ್ಲಿಗೇ ವರ್ಗವಾಗುವ ಹಿನ್ನೆಲೆಯಲ್ಲಿ ಪ್ರಶ್ನಿಸಿದಾಗ ಗುರುನಾಥರು ಅದ್ಯಾವ ಶುಭಗಳಿಗೆಗಾಗಿ ಕಾಯುತ್ತಿದ್ದರೋ, ಎರಡು ಮೂರು ಬಾರಿ ಕೇಳಿದರೂ ಒಪ್ಪಿಗೆ ನೀಡಿರಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ 'ಯಾವ ಕಡೆಗೆ ಹೊರಟಿದ್ದೀ... ಈಗ ಪೂರ್ತಿ ಬೆಂಗಳೂರಿಗೆ ವರ್ಗವಾಗಿಬಿಡು' ಎಂದು ಅನುಮತಿ ನೀಡಿದುದಲ್ಲದೆ, ನಾವೆಲ್ಲಿ ಮನೆಯನ್ನು ಮಾಡುತ್ತೇನೆಂಬುದನ್ನು ವಿಚಾರಿಸಿಕೊಂಡು, ಒಂದು ಕ್ಷಣ ಆಕಾಶವನ್ನು ನೋಡುತ್ತ 'ಹೋಗಯ್ಯ ಕಟ್ಟಿದ ಹೊಸ ಮನೆಯೇ, ನೀನು ಅಪೇಕ್ಷೆ ಪಟ್ಟ ಜಾಗದಲ್ಲೇ ಸಿಗುತ್ತದೆ' ಎಂದುಬಿಟ್ಟರು. ಗುರುನಾಥರು ಮನೆ ಮಾಡುವ ಗಲಾಟೆಯಲ್ಲಿ ಬೆಂಗಳೂರಿಗೆ ಬಂದ ನಾನು ಬ್ರೋಕರ್ ತೋರಿಸಿದ ಯಾವುದೊ ಒಂದು ಔಟ್ ಹೌಸ್ ನ ಮನೆಗೆ ಅಡ್ವಾನ್ಸ್ ಕೊಡಲು ಸಿದ್ಧನಾಗಿದ್ದೆ... ಓನರ್ ಸಿಗಲಿಲ್ಲವೆಂದು ಅತ್ತ ಹೋದ ಬ್ರೋಕರ್ ಗಂಟೆಗಳಾದರೂ ಬರಲೇ ಇಲ್ಲ. ಅಷ್ಟರಲ್ಲಿ ಮತ್ತೊಬ್ಬ 'ಇನ್ನೊಂದು ಮನೆ ಇದೆ. ಈಗ ತಾನೇ ಕಟ್ಟುತ್ತಿದ್ದಾರೆ. ಬೇಕಾದರೆ ಬಂದು ನೋಡಿ' ಎಂದ. ಆದರೆ ಈಗಾಗಲೇ ಒಬ್ಬನಿಗೆ ಮಾತು ಕೊಟ್ಟಾಗಿದೆಯಲ್ಲಾ ಎಂಬ ಚಿಂತೆಯಲ್ಲಿ ಇದ್ದ ನನಗೆ, ನನ್ನ ಜೊತೆಗಿದ್ದ ಬಂಧುಗಳು, 'ಮಾತು ಕೊಟ್ಟಾಯಿತು, ಗಂಟೆಗಟ್ಟಲೆ ಕಾದಿದ್ದೀವಿ. ಹಣವೇನೂ ಕೊಟ್ಟಿಲ್ಲವಲ್ಲ, ಈ ಔಟ್ ಹೌಸ್ ನ ಹಳೆಯ ಮನೆಗಿಂತ ಹೊಸದನ್ನು ಏಕೆ ನೋಡಿ ಬರಬಾರದು? ಎಂದು ಸಲಹೆ ನೀಡಿದ್ದಲ್ಲದೇ ಜೊತೆಗೆ ಕರೆದೊಯ್ದರು. ಪ್ಲಾಸ್ಟರ್ ಆಗುತ್ತಿದ್ದ ಆ ಮನೆಯನ್ನು ನೋಡಿ, ಓನರ್ ರೊಂದಿಗೆ ಮಾತನಾಡಿದೆ. ನನ್ನ ಮಿತಿಯಲ್ಲೇ ಅಡ್ವಾನ್ಸ್ ಸಹ ಕೇಳಿದರು. ಅಂತೂ ಗುರುನಾಥರು ಹೇಳಿದಂತೆ ಹೊಸ ಮನೆಗೇ ಬಂದೆ. ಗುರುನಾಥರು ಆಡಿದ ಮಾತುಗಳನ್ನು ನಾನು ಒತ್ತಡದಲ್ಲಿ ಮರೆತಿದ್ದೆ. ಆದರೆ, ಗುರುನಾಥರ ನುಡಿಗಳೆಂದರೆ 'ಕಲ್ಲಿನಲ್ಲಿ ಕೆತ್ತಿದ ಶಾಸನವಿದ್ದಂತೆ'. ಅವರ ಮಾತು ಎಂದೂ ಹುಸಿಯಾಗದು. ಸಖರಾಯಪಟ್ಟಣದಲ್ಲೇ ಕುಳಿತು ಅವರು ಹೇಳಿದ್ದರು. ಹೊಸ ಮನೆಯೂ ಸಿಕ್ಕಿತು. ಹೊಸ ಬಾಳುವೆಯೂ ಈ ಊರಲ್ಲಿ ನನ್ನದು ಪ್ರಾರಂಭವಾಗಿತ್ತು. ಇದೆಲ್ಲದರ ಹಿಂದೆ ಗುರುಕೃಪೆಯ ಅಪಾರ ಒಲವೇ ಮೂಲ. ಹೀಗೆ ಎರಡು ಬೆಡ್ ರೂಮ್ ನ ಮನೆಯನ್ನು ನಿರಾಯಾಸವಾಗಿ ದಯಪಾಲಿಸಿದ ಗುರುನಾಥರ ಇಹಕ್ಕಷ್ಟೇ ಅಲ್ಲ, ಪರದ ಬಗ್ಗೆಯೂ ಅನೇಕ ಮೌಲ್ಯಯುತ ವಿಚಾರಗಳನ್ನು ಬೋಧಿಸಿರುವುದು ನನ್ನ ಸೌಭಾಗ್ಯ. ಸಂಸಾರ, ಗಂಡ, ಹೆಂಡತಿ ಇವರ ಸೂಕ್ಷ್ಮ ಸಂಬಂಧಗಳ ಬಗ್ಗೆ ಹೇಳುತ್ತಾ 'ದಂಪತಿಗಳ ದಾಂಪತ್ಯ ಜೀವನದ ಸುಖ ಅವನಿಗೆ ಮಗನಾದರೆ, ಮಗನು ಉಪನಯನದ ವಯಸ್ಸಿಗೆ ಬಂದು ಅವನಿಗೆ ಗಾಯಿತ್ರಿ ಉಪದೇಶ ಮಾಡಿದ ನಂತರ ದಂಪತಿಗಳು ಜಗದ ತೋರಿಕೆಗೆ ಗಂಡ ಹೆಂಡತಿಯರಂತೆ ಇರಬೇಕು. ಅವರ ಮಧ್ಯೆ ಯಾವುದೇ ದೈಹಿಕ ಸಂಬಂಧಗಳಿಲ್ಲದೇ ಸಾಧಕನಂತೆ ಬಾಳಬೇಕು. ಅದೇ ರೀತಿ ಮಗಳಾದರೆ ಆಕೆ ಋತುಮತಿಯಾದ ನಂತರ ತಂದೆ ತಾಯಿಗಳು ಸಾಧಕರ ಜೀವನ ನಡೆಸುತ್ತಾ ಅಂಟಿಯೂ ಅಂಟದಂತೆ ಇರಬೇಕು. ಇನ್ನು ಜೀವನದಲ್ಲಿ ದ್ರವ್ಯಾರ್ಜನೆ, ಕೂಡಿ ಇಡುವುದು ಗುರಿಯಾಗಬಾರದು. ಕೊಟ್ಟು, ಕೊಟ್ಟು ಕೃತಾರ್ಥರಾಗಬೇಕು. ಕೂಡಿ ಕಳೆದುಕೊಳ್ಳುವುದಕ್ಕಿಂತ, ಕೊಟ್ಟು ಪಡೆದುಕೊಳ್ಳುವುದು ಸಾಧಕನ ಜೀವನದ ಗುರಿಯಾದರೆ ಚೆನ್ನ. 'ಒಬ್ಬ ಗುರುವನ್ನು ನಂಬು, ಚಂಚಲತೆಯನ್ನು ಬಿಡು' ಹೀಗೆ ಜೀವನದಲ್ಲಿ ಅತ್ಯಮೂಲ್ಯವಾದವುಗಳನ್ನೆಲ್ಲಾ ಆ ಸದ್ಗುರುಗಳು ನನಗೆ ನೀಡಿದ್ದಾರೆ. ಒಂದೊಂದು ತುತ್ತು ಅನ್ನವನ್ನು ಉಣ್ಣುವಾಗಲೂ ಗುರುನಾಥರ ನೆನಪಾಗುತ್ತದೆ. ಎಂದು ಯಾವುದೇ ಸಂಕಷ್ಟಗಳು ಬಂದಾಗಲೂ ನಿನ್ನನ್ನು ಯಾರ ಮನೆಯ ಮುಂದೂ ಹಾಕೋಲ್ಲ ಹೋಗಯ್ಯ' ಎಂದ ಮಾತು ನೆನಪಾಗುತ್ತದೆ. ಅದರಂತೆ ರಕ್ಷಿಸಿಕೊಂಡು ಬಂದಿದ್ದಾರೆ. ಎಂದೆಂದೂ ಆನಂದವಾಗಿರಬೇಕು. ನಾನಿವತ್ತು ಪಡೆದಿರುವುದೆಲ್ಲಾ ಗುರುನಾಥರು ಇತ್ತ ಭಿಕ್ಷೆ' ಎನ್ನುತ್ತಾರೆ ಅಶೋಕ್. 

ಶೋಕದ ಕಡಲಲ್ಲಿ ಮುಳುಗಿದವರೀಗ ಗುರುನಾಥರ ಕೃಪೆಯಿಂದ, ನಿಜವಾದ ಅರ್ಥದಲ್ಲಿ ಅಶೋಕರಾಗಿದ್ದಾರೆ. ಗುರುಕೃಪೆಯೇ ಹಾಗೆ, ಅದನ್ನು ಪಡೆಯಲು ದೃಢ ಮನಸ್ಸೊಂದು ಅನಿವಾರ್ಯ. ಲೋಕದ ಹಣ, ಕಾಸುಗಳನ್ನು ಕೋಟಿಗಳನ್ನು ಕಳೆದುಕೊಂಡರೂ ಅಶೋಕರನ್ನು ಸಂತಸದ ಕೋಟೆಯೊಳಗೆ ಇರಿಸಿ ರಕ್ಷಿಸುತ್ತಿರುವ ಗುರುನಾಥರಿಗೆ ಅದೆಷ್ಟು ನಮಿಸಿದರೂ ಸಾಲದು. ಇಂತಹ ಗುರುರಕ್ಷಾಕವಚ ಎಲ್ಲ ನಿತ್ಯ ಸತ್ಸಂಗಾಭಿಮಾನಿ ಭಕ್ತರಿಗೆಲ್ಲಾ ದೊರೆಯಲೆಂದು ಆಶಿಸೋಣ... ಮತ್ತೆ ನಾಳೆ ಭೇಟಿಯಾಗೋಣ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment