ಒಟ್ಟು ನೋಟಗಳು

Saturday, July 15, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 45
ಸರಳತೆಯ ಸಂತ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ಗುರು, ಸನ್ಯಾಸಿಗಳೆಂದರೆ ತುಂಬಾ ಮಡಿ, ಮೈಲಿಗೆ, ಎಂಬ ಭಾವವಿರುವ ಕೆಲವರು ಅಥವಾ ನೋಡಿದ ಕೂಡಲೇ ಅವರಿಗೆ ನಮ್ಮೆಲ್ಲಾ ತಪ್ಪುಗಳು ತಿಳಿದು ಎಲ್ಲರೆದುರಿಗೆ ಏನಾದರೂ ಹೇಳಿಬಿಟ್ಟರೆ ಹೇಗಪ್ಪಾ ಎಂಬ ಯೋಚನೆಯ ಕೆಲ ಮಂದಿ ಇಂತಹವರಿಂದ ವಿನಾ ಕಾರಣ ದೂರ ಇದ್ದೇ ಬಿಡುತ್ತಾರೆ. ಸಂತ ದರ್ಶನ ದುರ್ಲಭ. ಸಂತರ ಸೇವೆ ಸಿಗುವುದಂತೂ ಇನ್ನೂ ಕಷ್ಟಕರವಾಗಿರಬೇಕಾದರೆ ಕೆಲವರ ಮನದ ತಪ್ಪು ಕಲ್ಪನೆಗಳು ತಮಗೊದಗಿ ಬಂದ ಸುವರ್ಣಾವಕಾಶಗಳಿಂದ ದೂರವಿರುವಂತೆ ಮಾಡುತ್ತದೆ. ಅಸಲಿ ಎಂದರೆ ಗುರುವೆಂದರೆ ಕರುಣಾಶಾಲಿ, ನಮ್ಮ ಜನ್ಮದ ಉದ್ಧಾರ ಅವರ ದರ್ಶನ ಮಾರ್ಗದರ್ಶನದಿಂದ ಮಾತ್ರಾ ಸಾಧ್ಯ. 

ಇದ್ದುದ್ದನ್ನು ಇದ್ದಂತೆ ಹೇಳುವುದಾಗಲೀ, ಮುಂದಾಗುವುದನ್ನೂ ಇಂದೇ ತಿಳಿಸಿ ಎಚ್ಚರಿಸುವುದಾಗಲೀ, ಅದೂ ಒಂದು ಉಪಕಾರವೇ ಅಲ್ಲವೇ. ಅದು ಎಲ್ಲರಿಂದ ಆಗದ ಕೆಲಸ. ಘಟಿಸುವುದು ಘಟಿಸಿಯೇ ತೀರುತ್ತದೆ. ಅದನ್ನಾರೂ ಬದಲಾಯಿಸಲಾಗದು. ಆದರೆ ಗುರು ಕೃಪಾ ಛತ್ರವಿದ್ದರೆ ಘಟನೆಯ ತೀವ್ರತೆಯಿಂದ ಒಂದು ಸ್ವಲ್ಪ ಮುಕ್ತಿ ಸಿಕ್ಕೀತು. 

ಪ್ರಿಯ ಸತ್ಸಂಗಾಭಿಮಾನಿಗಳೇ ಇಂತಹ ಭಾವನೆಗಳ ತಾಕಲಾಟದಲ್ಲಿ ಸಿಕ್ಕ ಭಕ್ತರೊಬ್ಬರು, ಗುರುನಾಥರ ಬಗ್ಗೆ ಮೊದಲೇ ಕೇಳಿದ್ದರೂ ನಂತರ ಯಾವುದೋ ಸಮಸ್ಯೆಯ ಪರಿಹಾರಕ್ಕಾಗಿ ತಮ್ಮ ಬಂಧುಗಳ ಜೊತೆ, ಗುರುನಾಥರ ದರ್ಶನಕ್ಕಾಗಿ ಹೋದಾಗ, ಅಲ್ಲಿ ಕಂಡ ಗುರುನಾಥರ ಸರಳತೆಯಿಂದ ಹೇಗೆ ಭಕ್ತರಾಗಿ ಗುರುನಾಥರೇ ಅವರ ಜೀವನ ಸರ್ವಸ್ವವಾದರೆಂಬುದೇ ಇಂದಿನ ಗುರು ಚರಿತೆ. ಹಾಸನದ ಶ್ರೀಯುತ ದತ್ತಾತ್ರಿ ಎಂಬ ಭಕ್ತರ ಅನುಭವ ನಮಗಾಗಿ ಇಲ್ಲಿದೆ. 

"ಬಂಧುಗಳಾದ ಸುಬ್ರಹ್ಮಣ್ಯ ಎಂಬುವರು ಗುರುನಾಥರ ಬಗ್ಗೆ ತುಂಬಾ ಹೇಳುತ್ತಿದ್ದರು. ಆದರೆ ನನಗೆ ಗುರುಗಳು, ಸಾಧುಗಳು ಎಂದರೆ ತುಂಬಾ ಮಡಿ, ರೀತಿ  ರಿವಾಜುಗಳುಳ್ಳವರು. ನಾವು ಅವರ ಬಳಿ ಹೋಗಬಹುದಾ ಎಂಬ ಚಿಂತೆ ನನ್ನಲ್ಲಿ ಮೊದಲಿನಿಂದಲೂ ಇತ್ತು. ನಮ್ಮ ಬಂಧುಗಳೊಬ್ಬರು ಯಾವುದೋ ತೊಂದರೆಯಲ್ಲಿ ಸಿಕ್ಕಿಕೊಂಡಾಗ, ಇದು ಗುರುನಾಥರಿಂದ ಬಗೆಹರಿಯಬಹುದೆಂದು ಭಾವಿಸಿ ಅವರನ್ನೂ ಕರೆದುಕೊಂಡು ಗುರುನಾಥರ ಮನೆಗೆ ಹೋದೆ. ಅಷ್ಟೊಂದು ಜನ ಅಲ್ಲಿ ಕುಳಿತಿದ್ದರು. ನಾನೂ ಹೋಗಿ ನಮಸ್ಕರಿಸಿದೆ. ಅದೇನೋ ಆತ್ಮೀಯತೆಯಿಂದ ಗುರುನಾಥರು ನಿಮ್ಮನ್ನು ಬಹಳ ದಿನಗಳಿಂದ ನೋಡಿದ ಪರಿಚಯವಿದ್ದಂತೆ ಇದೆಯಲ್ಲಾ, ಎಲ್ಲೋ ನೋಡಿದಂತೆ ಇದೆಯಲ್ಲಾ... ನಿಮ್ಮ ಮಾತು ಬಹು ದಿನಗಳಿಂದ ಕೇಳಿದಂತೆ ಇದೆಯಲ್ಲಾ ಎಂದರು. ನಾನು ಇಲ್ಲ ಗುರುಗಳೇ ನಾನು ಇದೇ ಮೊದಲ ಬಾರಿ ಬರುತ್ತಿರುವುದು ಎಂದೆ'. 'ನೀನಾಗಿ ಏನೂ ಬಂದಿಲ್ಲ. ನಿಮ್ಮ ಮನೆಯವರು ಬಲವಂತವಾಗಿ ಕಳಿಸಿದ್ದಾರೆ ಅಲ್ಲವಾ' ಎಂದಾಗ ನನಗೆ ಬಹಳ ಆಶ್ಚರ್ಯವೂ ಆಯಿತು. ಆಗಿದ್ದುದೂ ಅದೇ. ಗುರುನಾಥರು ಎಲ್ಲ ಅರಿತ ಜ್ಞಾನಿಗಳೆಂಬ ವಿಚಾರ ನನಗೆ ಆ ಕೂಡಲೇ ಅನಿಸಿತು. ಜೊತೆಗೆ ನಿಜವಾದ ಗುರುವಿನ ಬಳಿ ಇಂದು ಬಂದಿದ್ದೇವೆಂಬ ಭಾವ ಬಂತು. ಸ್ವಲ್ಪ ಹೊತ್ತಿನಲ್ಲಿ ಅಲ್ಲಿದ್ದ ಎಲ್ಲರಿಗೂ ಗುರುನಾಥರು ಹೋಟಲಿನಿಂದ ಚಿತ್ರಾನ್ನ ತರಿಸಿದರು. ಎಲ್ಲರಿಗೂ ಕೊಟ್ಟು ತಾವೂ ಅದನ್ನು ತಿಂದರು. ಮಡಿ ಮೈಲಿಗೆ ಭಯದಲ್ಲಿದ್ದ ನನಗೆ ಗುರುನಾಥರ ಈ ಸರಳತೆ ನನ್ನನ್ನು ಅವರಿಗೆ ಅರ್ಪಿಸಿಕೊಳ್ಳುವಂತೆ ಮೊದಲ ನೋಟದಲ್ಲೇ ಮಾಡಿಬಿಟ್ಟಿತು. ಏನೇನೋ ಬೇಡದ ಚಿಂತೆಗಳನ್ನು ಮಾಡುತ್ತಾ ಇಷ್ಟು ದಿನ ಇಂತಹ ಮಹಾತ್ಮರಿಂದ ದೂರ ಉಳಿದುಬಿಟ್ಟಿದ್ದೆನಲ್ಲಾ ಎಂದು ಅನಿಸಿತು. 'ನಿಮ್ಮ ಮನೆಯವರು ಒತ್ತಾಯ ಮಾಡಿ ಕಳಿಸಿದರಲ್ಲವಾ ನಿನ್ನನ್ನು, ಇರಲಿ ಆ ಗೂಡಿಗೆ ಕೈ ಹಾಕಿ ನೋಡಿ ಅದರಲ್ಲಿ ಏನು ಸಿಗುತ್ತೋ ಅದನ್ನು ತೆಗೆದುಕೊಂಡು ಹೋಗು' ಎಂದರು. ಅಲ್ಲೊಂದು ಗೂಡು ಇತ್ತು. ಅದರೊಳಗೆ ಕೈ ಹಾಕಿದಾಗ ಒಂದು ಉತ್ತಮವಾದ ಸೇಬಿನ ಹಣ್ಣು ನನಗೆ ಸಿಕ್ಕಿತ್ತು. ಸುಮಾರು ಮೂರು ನಾಲ್ಕು ಗಂಟೆ ನಾನು ಗುರುನಾಥರ ಬಳಿ ಕುಳಿತಿದ್ದೆ. ನನ್ನ ಮನದಲ್ಲಿ ಚಿತ್ರ-ವಿಚಿತ್ರ ಪ್ರಶ್ನೆಗಳು ಏಳುತ್ತಿದ್ದವು. ನಾನು ಗುರುನಾಥರು ಆಡುತ್ತಿದ್ದ ಮಾತುಗಳಲ್ಲಿ ನನ್ನ ಪ್ರಶ್ನೆಗೆ ಉತ್ತರಗಳು ಅದು ನನಗೇ ಕುರಿತು ಹೇಳುತ್ತಿದ್ದಾರೇನೋ ಎಂಬಂತೆ ಬರುತ್ತಿತ್ತು. ಹೀಗೆ ಮೊದಲ ಭೇಟಿಯಲ್ಲಿಯೇ ಗುರುನಾಥರು ನನ್ನವರಾದರು. ಮುಂದೆ ನಾನು ಅನೇಕ ಸಾರಿ ಗುರುನಾಥರನ್ನು ಕಾಣಬೇಕೆಂದಾಗಲೆಲ್ಲಾ ಹೋಗಿ ದರ್ಶನ ಪಡೀತಿದ್ದೆ. ಈ ಮಧ್ಯೆ ನಾನು ಮಂಗಳೂರಿಗೆ ವರ್ಗವಾದೆ. ಅನೇಕ ದಿನಗಳು ಅವರ ದರ್ಶನವಾಗಲಿಲ್ಲ. ಮತ್ತೆ ಒಮ್ಮೆ ನಾವು ಮನೆಯವರೆಲ್ಲಾ ಹಾಸನಕ್ಕೆ ಬರುವಾಗ ದಾರಿಯುದ್ದಕ್ಕೂ ಗುರುನಾಥರನ್ನು ಈ ದಿನವೇ ಹೋಗಿ ನೋಡಬೇಕೆಂಬ ವಿಚಾರ ಅವರಿಗೆ ಅರೋಗ್ಯ ಸರಿ ಇಲ್ಲವೆಂಬ ವಿಚಾರವೇ ಮಾಡುತ್ತಾ ಬಂದೆವು. ಹಾಸನಕ್ಕೆ ಬಂದು ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಗುರುನಾಥರು ಒಂದೆಡೆ ಕುಳಿತಿರುವುದನ್ನು ಕಂಡು ನಮ್ಮ ಮನೆಯವರು ಗುರುಗಳು, ಗುರುಗಳು ಎಂದು ಸಂಭ್ರಾಂತಳಾಗಿ ಕೂಗಿದರು. ಕಾರು ನಿಲ್ಲಿಸಿ ನಾವೆಲ್ಲಾ ಹೋದೆವು. ನೆನೆದವರು ಎದುರಲ್ಲಿ ಕಂಡಾಗ, ನನ್ನ ಕಣ್ಣುಗಳಲ್ಲಿ ಆನಂದಭಾಷ್ಪ ಹರಿಯುತ್ತಿತ್ತು. ಕೊರಳುಬ್ಬಿ ಬಂದು ಮಾತನಾಡಲಾಗದ ಸ್ಥಿತಿಯಲ್ಲಿದ್ದೆ. ನಮಿಸಿದೆ. 'ಹೋಗು ನಿನ್ನ ಮಗ ರ‍್ಯಾಂಕ್ ಬರ್ತಾನೆ, ಹೋಗು' ಎಂದು ನಮ್ಮ ಮನೆಯವರಿಗೆ ತಮ್ಮ ಕೈಯಿಂದ ಎರಡು ಮುಷ್ಠಿ ಅವಲಕ್ಕಿ ನೀಡಿದರು. ನಮಗಾದ ಸಂತಸಕ್ಕೆ ಪಾರವೇ ಇರಲಿಲ್ಲ. ಅಲ್ಲಿಂದ ಅನತಿ ದೂರದಲ್ಲಿರುವ ನಮ್ಮಣ್ಣನ ಮನೆಗೆ ಹೋಗಿ ಗುರುನಾಥರು ಬಂದಿರುವ ವಿಚಾರ ತಿಳಿಸಿ ಅವರು ಅಲ್ಲಿಗೆ ಬಂದರೆ ಗುರುನಾಥರು ಅಲ್ಲಿರಲೇ ಇಲ್ಲ. ನಮಗೆ ದರ್ಶನ ಕೊಡಲೆಂದೇ ಕಾದು ಕುಳಿತಿದ್ದರೇನೋ ಎಂಬಂತೆ ಅನಿಸಿತು ನನಗೆ'. 

ನಿತ್ಯ ಸತ್ಸಂಗಾಭಿಮಾನಿಗಳೇ ನೋಡಿ ಹೇಗಿದೆ ಗುರುನಾಥರ ಕರುಣೆ. ಅನವರತ ಅವರ ಧ್ಯಾನ ಮಾಡುವವರಿಗೆ ಅವರು ಅಭಯ ಪ್ರದಾನ ಮಾಡುವ ರೀತಿಯೇ ವಿಚಿತ್ರ. ಭಕ್ತ ಹೃದಯದ ಈ ನಮ್ಮ ಭಗವಂತ ಗುರುನಾಥರು ದೇಹಾತೀತರಾಗಿಯೂ ದರ್ಶನ ನೀಡಿದ ಅನೇಕ ಪ್ರಸಂಗಗಳಿವೆ. ಎಂದಾದರೂ ಅಂತಹ ಪ್ರಸಂಗಗಳೂ ನಿತ್ಯ ಸತ್ಸಂಗಕ್ಕೆ ದೊರೆತಾವು, ಗುರು ಕೃಪೆಯನ್ನು ಬಲ್ಲವರಾರು. ನಿರಂತರ ಅವರ ಸ್ಮರಣ, ಮನನ, ಶ್ರವಣ, ಮಾಡೋಣ. ನಾಳೆಯೂ ಇರುವಿರಲ್ಲಾ ನಮ್ಮೊಂದಿಗೆ.... ನಿತ್ಯ ಸತ್ಸಂಗಕ್ಕಾಗಿ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment