ಒಟ್ಟು ನೋಟಗಳು

Tuesday, July 18, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 48
ಶಾರದೆ ಬರುತ್ತಾಳೆ ಸೀರೆ ತನ್ನಿ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


ಗುರುನಾಥರ ಮನೆಗೆ ಒಬ್ಬ ಭಕ್ತೆ ಬಂದರು ಒಂದು ದಿನ. ಗುರುನಾಥರಿಗೆ ಅವರನ್ನು ಕಂಡರೆ ತುಂಬಾ ಅಭಿಮಾನ. ಕೆಲವೊಮ್ಮೆ ನಮ್ಮ ಅಭಿಮಾನ ನಮ್ಮನ್ನೇನಾದರೂ ಬೇರೆ ದಾರಿಗೆ ಒಯ್ಯುವ ಸಂದರ್ಭ ಬಂದಾಗ ಗುರುನಾಥರು ನಡೆಸುವ ಲೀಲೆ ವಿಚಿತ್ರವಾದುದಾಗಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಬಹು ಕಷ್ಟ. ಒಮ್ಮೆ ಒಬ್ಬ ಸುಶಿಕ್ಷಿತೆ, ತುಂಬಾ ಸೊಫೆಷ್ಟಿಕೇಟೆಡ್ ಆಗಿರುವ ಮಹಿಳೆ ಗುರುನಾಥರ ಮನೆಗೆ ಬಂದಾಗ ಕಾಯಿಲೆಯಾಗಿರುವ ನಾಯಿಯೊಂದು ಆವರ ಪಕ್ಕದಲ್ಲಿ ಬಂದು ಕುಳಿತಾಗ ಆಕೆ ಅಸಹ್ಯ ಪಟ್ಟುಕೊಂಡು ದೂರ ದೂರ ಸರಿಯುತ್ತಿರುವಾಗ, ಗುರುನಾಥರು "ನೀನಿಲ್ಲೇ ಕೂತಿರಬೇಕು.. ಅದರ ಜಾಗವಿದು. ನಾವು ಬಂದು ಅದನ್ನು ಓಡಿಸುವುದು ಸರಿಯಾ" ಎಂದು ಹೇಳಿದ್ದರಂತೆ. ಇಲ್ಲೆಲ್ಲಾ ನಮ್ಮ ಮನದ ತಪ್ಪು ಕಲ್ಪನೆಗಳನ್ನು ಸರಿ ಮಾಡಲು ಗುರುನಾಥರು ಆಡುತ್ತಿದ್ದ ಲೀಲೆಗಳು ವಿಚಿತ್ರವಾಗಿತ್ತು. 

ಆ ಭಕ್ತೆಯನ್ನು ತುಂಬಾ ಗೌರವಿಸುವ ಗುರುನಾಥರು ಅಂದು "ತಮ್ಮ ಭಕ್ತರಿಗೆಲ್ಲಾ ಶಾರದೆ ಸರಸ್ವತಿ ಬರುತ್ತಿದ್ದಾಳೆ. ಎಲ್ಲರೂ ಸೀರೆಗಳನ್ನು ತಂದು ಪೂಜಿಸಿ, ಅರ್ಪಿಸಿ ಎಂದಿದ್ದರು. ಆ ಭಕ್ತೆ ಬಂದಾಗ ಸೀರೆಯನ್ನು ಒಬ್ಬೊಬ್ಬರೇ ಗುರು ಬಾಂಧವರುಗಳು ತಂದು ಅರ್ಪಿಸುತ್ತಿದ್ದರು. ಆ ಗುರುಭಕ್ತೆಗೆ ಇದೇನಿದು ನನ್ನನ್ನು ಶಾರದೆ, ಸರಸ್ವತಿ ಎನ್ನುತ್ತಿದ್ದಾರೆ ಎಂದು ಆಶ್ಚರ್ಯಪಡುತ್ತಿದ್ದರೂ ಆ ತಾಯಿ ಅಂತಹ ಘನ ಸೇವೆಯನ್ನೇ, ತಾಯಿ ಶಾರದೆಯ ಸೇವೆಯನ್ನು ಅವಿರತ ಮಾಡುತ್ತಾ ಬಂದಿದ್ದರಂತೆ. ತಮ್ಮ ಶಕ್ತಿ ಮೀರಿ ಅಮ್ಮನ ಸೇವೆಯನ್ನೇ ತಮ್ಮ ಉಸಿರಾಗಿಸಿಕೊಂಡಿದ್ದರಂತೆ. ಆ ಭಕ್ತೆ ಅತ್ಯಂತ ಸರಳ ಜೀವಿಯಾದರೂ ಅವರು ಉಡುತ್ತಿದ್ದುದು ಹತ್ತಿಯ ಸೀರೆಗಳನ್ನು, ಇಲ್ಲದಿದ್ದರೆ ಸೀರೆಗಳನ್ನೇ ಅದೊಂದು ಅವರು ರೂಢಿಸಿಕೊಂಡು ಬಂದಿದ್ದ ಅಭ್ಯಾಸವಾಗಿಬಿಟ್ಟಿತ್ತೇನೋ. 

ಹೀಗೆ ಬಂದವರಿಗೆಲ್ಲಾ ಗುರಿವಿನ ಆಜ್ಞೆಯಂತೆ ಸೀರೆಯನ್ನು ತಂದು ಅವರಿಗೆ ಅರ್ಪಿಸಿ ನಮಸ್ಕರಿಸುತ್ತಿರುವಾಗ, ಈ ಸೀರೆಗಳ ರಾಶಿಯ ಮಧ್ಯೆ ಒಂದು ಸೀರೆ, ಈ ಭಕ್ತೆಯ ಗಮನ ಸೆಳೆಯಿತಂತೆ. ಅದೊಂದು ಪಾಲಿಯೆಸ್ಟರ್ ಸೀರೆ... ಪೂಜೆ ಉಡುಗೊರೆಯ ಅರ್ಪಣವಾದ ಬಳಿಕ ಅವರ ಬಳಿ ಬಂದ ಗುರುನಾಥರು ಆ ಸೀರೆಗಳ ಗುಡ್ಡೆಯಿಂದ ಅದೇ ಪಾಲಿಯೆಸ್ಟರ್ ಸೀರೆಯನ್ನೇ ಹೊರ ತೆಗೆದು ಇದನ್ನೇ ನೀವು ಈ ದಿನ, ಈಗ ಉಟ್ಟುಕೊಂಡು ಬರಬೇಕೆಂದರಂತೆ. ಗುರುನುಡಿ ಮೀರಲು ಸಾಧ್ಯವೇ? ಎಂದೂ ಪಾಲಿಯೆಸ್ಟರ್ ಸೀರೆ ಉಡದ ಆ ಭಕ್ತೆ, ಗುರುನಾಥರ ನುಡಿಯಂತೆ ಪಾಲಿಯೆಸ್ಟರ್ ಸೀರೆಯನ್ನು ಉಟ್ಟು ಬಂದರು. ಗುರುನಾಥರು ಅವರಿಗೊಂದು ಹೂವಿನ ಮಾಲೆಯನ್ನು ಹಾಕಿಸಿದ್ದರು. ನಂತರ "ನೀವು ಹೀಗೆಯೇ ಶೃಂಗೇರಿಗೆ ಹೋಗಬೇಕೆಂದು ನುಡಿದರಂತೆ. 

ಆ ಗುರುಭಕ್ತೆ ಅಂತೆಯೇ ಶೃಂಗೇರಿಗೆ ಹೋದರು. ದಾರಿಯಲ್ಲಿ ಅನೇಕರು ಇವರ ಪರಿಚಯದವರು ಇವರ ಪಕ್ಕದಲ್ಲೇ ಹೋದರು. ಒಬ್ಬರೂ ಗುರುತಿಸಲೇ ಇಲ್ಲವಂತೆ. ಇದೇನಿದು ಗುರುವಿನ ಮಾಯೆ? ಎಂದು ಅವರು ಅರಿಯದಾದರಂತೆ. ಶೃಂಗೇರಿಯ ಸೇವೆಯನ್ನು ಮುಗಿಸಿದ ನಂತರ ಮತ್ತೆ ಗುರುನಾಥರಿಂದ ಬಂದ ವಿಚಾರವೆಂದರೆ ಅವರು ಅದೇ ರೀತಿಯಲ್ಲಿ ತಾವಿರುವ ಊರಿಗೆ ಹೋಗಬೇಕು ಎಂಬುದಾಗಿತ್ತು. 

ಶೃಂಗೇರಿಯಿಂದ ಮತ್ತೆ ತಮ್ಮ ವಾಸದ ಊರಿನವರೆಗೆ ಅದೇ ಸ್ಥಿತಿಯಲ್ಲಿ ಅವರು ಹೋದರಂತೆ. ಅದೆಷ್ಟೋ ಜನ ಪರಿಚಿತರು ಇವರ ಎದುರಿನಲ್ಲಿ ಬಂದರೂ, ಪರಿಚಯವಿಲ್ಲದವರಂತೆ ಹೋಗುತ್ತಿದ್ದರಂತೆ. ಹಾಗಾದರೆ ಇದೇನು ವೈಷ್ಣವ ಮಾಯೆಯೋ? ಆ ಭಕ್ತೆಯನ್ನು ಗುರುನಾಥರು ಪರೀಕ್ಷಿಸಿದ ರೀತಿಯೋ ಅಥವಾ ನಮ್ಮಲ್ಲಿ ಸೇರಿದ ಬೇಡದ ಯಾವುದೋ ಭಾವನೆಯನ್ನು ದೂರ ಮಾಡಲು ನಮ್ಮ ಮನಸ್ಸಿಗೆ ಆಗದುದನ್ನೇ ನಮ್ಮ ಮೇಲೆ ಹೇರಿ ನಮ್ಮನ್ನು ಸರಿ ಮಾಡುವುದು ಗುರುವಿನ ಚಾಣಾಕ್ಷತನವೋ, ಅರಿಯುವುದು ನಿರ್ಧರಿಸುವುದು ಅಸಾಧ್ಯ. 

ಗುರುವಿಗಿಂತ ಶಿಷ್ಯರು, ಶಿಷ್ಯರಿಗಿಂತ ಗುರುವು ಅಚಲ ಭಾವದಲ್ಲಿ ಸಾಗುವ ಈ ನಾಟಕ ನಮಗೊಂದು ಪಾಠವೋ ಏನೋ? ಅಂತೂ ಗುರುವಿನ ಆಜ್ಞೆಗೆ ತಲೆಬಾಗಿ ಅವರು ನೀಡಿದ ಪರೀಕ್ಷೆಯಲ್ಲಿ ಸಾಗಿದ ಆ ಭಕ್ತೆಯಲ್ಲೇನು ಮಾರ್ಪಾಡಾಯಿತೋ, 'ಭಲೇ ಗಟ್ಟಿಗ ಭಕ್ತೆಯೇ?' ಎಂದು ಗುರುನಾಥರೆಂದಿರಬೇಕು. 

ಪ್ರಿಯ ಸತ್ಸಂಗಾಭಿಮಾನಿ ಗುರುನಾಥ ಭಕ್ತರೇ, ಜೀವನವೇ ಒಂದು ಪರೀಕ್ಷಾ ರಂಗ. ಗುರುನಾಥರ ಪಾದಗಳನ್ನು ನಂಬಿ, ಅವರ ಕೃಪಾಕಟಾಕ್ಷ ಪಡೆದೆವೆಂದು ಹೆಮ್ಮೆ ಪಡುವುದರ ಜೊತೆಗೆ ನಿರಂತರ ಅವರ ದಾಸಾನುದಾಸರಾಗಿ ನಡೆಯುವುದಷ್ಟೇ ನಮ್ಮ ಕೆಲಸವಾದಾಗ... ಈ ಪರೀಕ್ಷೆ ಎಂಬ ನಾಟಕದಲ್ಲಿ ಅನೇಕ ಸಾರಿ ಪರೀಕ್ಷೆ ಮಾಡುವ ಗುರುವೂ, ಪರೀಕ್ಷೆಗೆ ಒಳಪಟ್ಟ ಭಕ್ತರೂ, ನೆಮ್ಮದಿಯಿಂದಲೇ ಇರುತ್ತಾರೆ. ಸುಮ್ಮನೆ ಬಾಹ್ಯ ಚಕ್ಷುಗಳಿಂದ ನೋಡುವ ನಮಗೆ.... ಮುಂದೇನು? ಮುಂದೇನು ಎಂಬ ತವಕ ಕಾಡುತ್ತಿರುತ್ತದೇನೋ. ಗಟ್ಟಿ ಮನಸ್ಸಿನ ಅವರಿಬ್ಬರೂ ನಿಶ್ಚಿಂತರಾಗಿ ಇದ್ದಿರಬಹುದು. 

ಇಂತಹ ನಿಶ್ಚಿಂತ ಮನ ನಮ್ಮದಾಗಲು, ಗುರುನಾಥರ ಕರುಣೆ ನಮ್ಮ ಮೇಲೆ ಆಗಬೇಕಲ್ಲ. ಮಿತ್ರರೇ, ನಾಳಿನ ಸತ್ಸಂಗಕ್ಕೂ ನಮ್ಮೊಂದಿಗೆ ಇರಿ. ಘಟನೆಗಳಿಗೆ ಮೂಕ ಸಾಕ್ಷಿಗಳಾಗಿ, ಸತ್ಸಂಗತ ಫಲ ಪಡೆಯೋಣ. ಅಲ್ಲವೇ? 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment