ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 34
ಗುರುವಿನ ಬಲದ ಗುರುಬಲ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುಶಿಷ್ಯರ ಸಂಬಂಧವೆಂದರೆ ಒಂದು ನಮಸ್ಕಾರ ಮಾಡಿ, ಬೇಕಾದ್ದನ್ನು ಪಡೆದು ಬಿಟ್ಟುಬಿಡುವುದಲ್ಲ. ಅದು ನಿರಂತರ... ಅವಿನಾಭಾವದ ಸಂಬಂಧವೇ ಅದು ಯಾವ ಜನ್ಮದಿಂದ ಅಂಟಿಕೊಂಡು ಬಂದಿದೆ ಎಂಬುದು ಈ ಚಕ್ಷುವಿಗೆ ಅರ್ಥವಾಗದಿದ್ದರೂ ಅದು ಹೇಗೋ ಬೆಸೆದುಕೊಂಡು ಅಂತರ ಸೆಲೆಯಾಗಿ ನಿರಂತರ ಹರಿದು ಬರುತ್ತಿರುತ್ತದೆ. ಆಗ ಭಕ್ತರ ಪರ್ಸನಲ್ ಎಂಬ ಯಾವ ವ್ಹಿಚಾರವೂ ಗುರುವಿನ ಬಳಿ ಉಳಿಯದು. ನಾವು ತಿಳಿಸದಿದ್ದರೂ ಗುರುವೇ ತಿಳಿದು ನಾವು ಮಾಡುತ್ತಿರುವ ತಪ್ಪನ್ನು ನವಿರಾಗಿ ತಿದ್ದಿ, ಮುಂದೆ ತಪ್ಪುಗಳನ್ನು ಆಗದಂತೆ ಕರುಣಿಸುವುದೇ ಗುರುಕರುಣೆ. ಅಂತಹ ಗುರುಕರುಣೆಯ ವಿಶೇಷವೇ ಇಂದಿನ ಸತ್ಸಂಗದ ವಿಚಾರವಾಗಿದೆ.
ನಾವು ಜಾತಕ, ಪಂಚಾಂಗ, ಗುರುಬಲಗಳನ್ನು ಲೆಕ್ಕಾಚಾರ ಮಾಡಿಸಿ ಮುಹೂರ್ತಗಳನ್ನಿಡುತ್ತೇವೆ. ಎಲ್ಲಕ್ಕೂ ಗುರುಬಲ ಬರಬೇಕು ಎನ್ನುತ್ತೇವೆ. ನಿಜವಾದ ಗುರುಬಲವೆಂದರೆ, ಸದ್ಗುರುವಿನ ಬಲವೇ ಅಸಲಿ ಗುರುಬಲ. ಅಂತಹ ಸದ್ಗುರು ಯಾವ ಪಂಚಾಂಗವನ್ನೂ ನೋಡರು. ಜಾತಕವನ್ನೂ ಪರಾಮರ್ಶಿಸರು. ಅವರ ಬಾಯಿಯಿಂದ ಬಂದ ನುಡಿ, ಸಮಯವೇ ಸುಮುಹೂರ್ತ. ಗಾಯಿತ್ರಿಯವರ ಅನುಭವವೀಗ ನಮ್ಮ ಸತ್ಸಂಗಕ್ಕೆ ಒದಗಿದೆ.
"ನಮ್ಮ ಮಗುವಿನ ಚೌಲ ಕರ್ಮದ ಸಮಯವನ್ನು ಪುರೋಹಿತರು ಈ ಮೊದಲೇ ನಿರ್ಧರಿಸಿದ್ದರು. ಆದರೆ ಅದು ಚೌಲ ಕರ್ಮಕ್ಕೆ ಪ್ರಶಸ್ತವಾಗಿರಲಿಲ್ಲ. ದ್ವಾದಶಿ ಚೌಲ ಮಾಡಬಾರದಂತೆ. ಇತರ ಪೂಜಾದಿಗಳು, ಉದಕ ಶಾಂತಿ ಮುಂತಾದ ಕಾರ್ಯಗಳನ್ನು ನಡೆಸಿಸಿ, ನಿಮ್ಮ ತಾಯಿಗೊಂದು ಶಾಂತಿ ಮಾಡಿಸಿಬಿಡು ಎಂದು ಹೇಳಿ ಆ ಶಾಂತಿಯನ್ನು ಅಂದೇ ಮಾಡಿಸಿದರು. ಬೆಳಗಿನ 8:30 ಕ್ಕೆ ಇದ್ದ ಮುಹೂರ್ತವಂತೂ ತಪ್ಪಿತ್ತು. ಮಧ್ಯಾನ್ಹದ ಉತ್ತಮ ಮುಹೂರ್ತದಲ್ಲಿ ಗುರುನಾಥರು ಚೌಲ ಕರ್ಮವನ್ನು ನೆರವೇರಿಸಿದರು. ಯಾವ ಜನ್ಮದಲ್ಲಿ ಗುರುನಾಥರಿಗೆ ಒಂದು ಲೋಟ ನೀರನ್ನು ಕೊಟ್ಟಿದ್ದೆವೋ, ಈಗ ಹೀಗೆ ನಮ್ಮ ಎಲ್ಲ ವಿಚಾರಗಳಲ್ಲಿ ಯಾವುದೇ ತಪ್ಪುಗಳಾಗದಂತೆ ತಮ್ಮ ಮನೆಯ ಕೆಲಸಕ್ಕಿಂತ ಅಧಿಕವಾಗಿ ಆಸ್ಥೆ ವಹಿಸಿ ನಮ್ಮನ್ನು ಕಾಪಾಡುತ್ತಿದ್ದಾರೆ".
ಒಮ್ಮೆ ಗುರುನಾಥರ ಬಳಿ ಹೋಗಿದ್ದಾಗ ಆ ವರ್ಷ ನಮ್ಮವರ ತೋಟದಿಂದ ಬಂದ ಅಡಿಕೆ ಮೂಟೆಗಳು ಇಷ್ಟೇ ಆಗಿವೆ ಎಂದು ಕರಾರುವಕ್ಕಾಗಿ ಗುರುನಾಥರು ನುಡಿದರಂತೆ. "ಬೇಕಾದರೆ ಹೋಗಿ ಎಣಿಸಿ ನೋಡಿ. ಇಷ್ಟೇ ಮೂಟೆಗಳಿವೆ. ನನಗ್ಯಾವ ಸ್ಕ್ಯಾನಿಂಗ್ ಬೇಡ" ಎಂದು ತಿಳಿಸಿದಾಗ ಆ ಭಕ್ತರು ಬಂದು ಎಣಿಸಿ ನೋಡಿದರೆ ಅವರು ಹೇಳಿದಷ್ಟೇ ಮೂಟೆಗಳಿದ್ದವಂತೆ.
ಗುರುನಾಥರ ಮಹಾ ನಿರ್ವಾಣವಾದ ಮೇಲೂ ಈ ಭಕ್ತರ ಮಗನ ಉಪನಯನ ಸಂದರ್ಭದಲ್ಲೂ ನಡೆದ ಒಂದು ವಿಶೇಷವೆಂದರೆ ಈ ಭಕ್ತರು ತಮ್ಮ ಮಗನ ಉಪನಯನ ನಡೆಸುತ್ತಿರುವಾಗ, ಗುರುನಾಥರ ಸ್ಮರಣೆ ಮಾಡದೇ ಇರಲು ಸಾಧ್ಯವೇ? ಇದೇ ಮಗುವಿನ ಚೌಲ ಕರ್ಮ ನಡೆಸಿದ್ದು ಗುರುನಾಥರೇ ಎಂಬ ನೆನಪೂ ಬರದಿರುತ್ತದೆಯೇ? ಅಂದು ಉಪನಯನದ ಸಮಯದಲ್ಲಿ ವೃದ್ಧರಿಬ್ಬರು ಬಂದರು. ಊಟಕ್ಕೆ ಆಹ್ವಾನಿಸಿದರೆ ಬೇಡ, ಸಂಭಾವನೆ ಕೊಟ್ಟುಬಿಡಿ ಸಾಕು ಎಂದು ಅವರಂದಾಗ ಸಂಭಾವನೆ ಫಲ ತಾಂಬೂಲಗಳನ್ನಿವರು ನೀಡಿದರಂತೆ. ಇದು ವಟುವಿನ ತಂದೆ ಹಾಗೂ ತಾಯಿಗಳು ಪುರೋಹಿತರಿಗೆ ಮಾತ್ರಾ ತಿಳಿದ ಸಂಗತಿ. ಸಂಭಾವನೆ ಕೊಟ್ಟ ನಂತರ ಆ ಮರುಕ್ಷಣದಲ್ಲಿ ಆ ಇಬ್ಬರೂ ಅದೆಲ್ಲಿ ಹೋದರೋ ತಿಳಿಯಲಿಲ್ಲ. ಭಕ್ತರ ಮನಸ್ಸಿಗಂತೂ ನಾವು ನೆನೆಸಿದಂತೆ ಗುರುನಾಥರೇ ಬಂದು ವಟುವಿಗೆ ಆಶೀರ್ವದಿಸಿದ್ದಾರೆಂಬ ನೆಮ್ಮದಿ. ಗುರುವಿಗೆ ಅಸಾಧ್ಯವಾದದ್ದು ಏನಿದೆ? ಯದ್ಬಾವಂ ತದ್ಭವತಿ ನಮಸ್ಕಾರ ಮಾಡಿದಾಗ "ನಾನು ಉಡುಪಿಯಿಂದ ಬಂದಿದ್ದೀನಿ" ಎಂದರಂತೆ. ಇದು ಇತ್ತೀಚೆಗೆ ಎರಡು ವರ್ಷಗಳ ಕೆಳಗೆ ಆದ ಅನುಭವವಂತೆ.
ಮತ್ತೊಬ್ಬ ಭಕ್ತೆ ತನ್ನ ಮಗನ ಮದುವೆಯಾಗಿ ನಾಲ್ಕೈದು ವರ್ಷವಾದರೂ ಅವರಿಗೆ ಮಕ್ಕಳಾಗದೇ ಇದ್ದಾಗ, ಎಲ್ಲ ಡಾಕ್ಟರ್ ಬಳಿ ಪರೀಕ್ಷಿಸಿ, ಇವರಿಗೆ ಮಕ್ಕಳಾಗುವುದಿಲ್ಲವೆಂದು ತಿಳಿದಾಗ, ಗುರುನಾಥರ ಬಳಿ ಬಂದ ಆ ಸಾಧ್ವಿ ತಮ್ಮ ನೋವನ್ನು ತೋಡಿಕೊಂಡರಂತೆ. ಆ ಕೂಡಲೇ ಗುರುನಾಥರು "ಚಿಂತೆ ಮಾಡಬೇಡಮ್ಮ ಮಗುವಾಗುತ್ತೆ.. ನಿನ್ನ ಸೊಸೆಗೆ ಕೇಳಿ ನೋಡು ಅವಳ ಕಾಲು ತುರಿಸ್ತಾ ಇದೆ. ಕೊಬ್ಬರಿ ತಿನ್ನಬೇಕೆಂಬ ಆಸೆ ಆಗ್ತಿದೆ.. ಚಿಂತೆ ಮಾಡಬೇಡ ಮಗುವಾಗುತ್ತೆ" ಎಂದು ಆಶೀರ್ವದಿಸಿದರಂತೆ.
ಫೋನು ಮಾಡಿ ಕೇಳಿದಾಗ ಗುರುನಾಥರು ತಿಳಿಸಿದ್ದು ನಿಜವಾಗಿತ್ತು. ಸೊಸೆ ಇದನ್ನು ಹೌದೆಂದು ಉತ್ತರಿಸಿದ್ದರು.
ಕೆಲ ದಿನಗಳ ಹಿಂದೆ ಡಾಕ್ಟರ್ ಬಳಿ ಹೋಗಿದ್ದ ದಂಪತಿಗಳಿಗೆ ಅಂತಹ ಯಾವ ಸೂಚನೆ ಇಲ್ಲ ಎಂಬ ಉತ್ತರ ಬಂದಿತ್ತು. ತದನಂತರ ಕೆಲ ದಿನಗಳಾದ ಮೇಲೆ ಹೋದಾಗ ಗರ್ಭಿಣಿಯಾಗಿರುವುದನ್ನು ಡಾಕ್ಟರು ದೃಢಪಡಿಸಿದರಂತೆ. ಹೀಗೆ ವೈದ್ಯರ ವೈದ್ಯರಾಗಿ ಗುರುನಾಥರು ಕಂಡು ಬಂದಿದ್ದರು.
ಗುರುನಾಥ ಪ್ರಿಯ ನಿತ್ಯ ಸತ್ಸಂಗ ಪ್ರೇಮಿಗಳೇ, ಸತ್ಸಂಗದಲ್ಲಿ ಗುರುಕಥಾಮೃತ ನಿರಂತರ ಸಾಗುತ್ತಿದೆ. ನಾಳೆಯೂ ನಮ್ಮೊಂದಿಗೆ ಇರಿ... ಬರಲೇ... ಸಹಸ್ರಾರು ಭಕ್ತರು - ಸಹಸ್ರಾರು ಕೃಪೆಗಳು, ಸದ್ ವಿಚಾರಗಳು ನಿರಂತರ ಸಾಗಲಿ ಗುರುಕಥಾಮೃತ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment