ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 35
ಇಪ್ಪತ್ತೇಳು ನಕ್ಷತ್ರಗಳೂ ಕೂಡಿ ಬಂದಿವೆ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುಬಲ ಬರದೇ ಏನು ಕೆಲಸವಾಗುವುದಿಲ್ಲವೆಂಬ ನಂಬಿಕೆ ಎಲ್ಲರದು ಹೌದು. ಆದರೆ ಇದು ಗುರುಭಕ್ತರಿಗೆ ಗುರುಬಲ ಬರುವುದೆಂದರೆ, ಸದ್ಗುರುವಿನ ಆಶೀರ್ವಾದವೇ ಗುರುಬಲ.... 'ಸಕಲ ಗ್ರಹಬಲ ನೀನೇ ಸದ್ಗುರುನಾಥ' ಎಂದು ನಂಬಿದ ಗುರುಭಕ್ತರೊಬ್ಬರು ಮೊಟ್ಟಮೊದಲ ಬಾರಿಗೆ ಸಖರಾಯಪಟ್ಟಣದ ಗುರುನಾಥರನ್ನು ಕಂಡದ್ದು, ಕಂಡ ಘಳಿಗೆಯಲ್ಲೇ ಗುರುನಾಥರ ಸಂಪೂರ್ಣ ಅನುಗ್ರಹ ಪಡೆದು, ಗುರುನಾಥರು ಅವರ ಮಗಳ ಮದುವೆಯನ್ನು ಮಾಡಿಸಿದ ವಿಚಾರವೇ ಇಂದಿನ ನಿತ್ಯ ಸತ್ಸಂಗದ ವಿಚಾರವಾಗಿದೆ. ಅಕಸ್ಮಾತ್ತಾಗಿ ಬೆಂಗಳೂರಿನಲ್ಲಿ ಭೇಟಿಯಾದ ಲೋಕೀಕೆರೆಯು ಗುರು ಭಕ್ತರಾದ ಶ್ರೀಧರ ಮೂರ್ತಿಯವರ ಅನುಭವಗಳು, ಗುರುನಾಥರ ದರ್ಶನದ ಸುಫಲಗಳು ಹೇಗಿವೆ ಕೇಳೋಣ ಬನ್ನಿ.
"ನನಗೆ ಮೂರು ಹೆಣ್ಣು ಮಕ್ಕಳು. ಆಗ ತಾನೇ ಇಬ್ಬರ ಮದುವೆಯಾಗಿತ್ತು. ನಾನೇನು ಮಾಡುವುದು ಎಲ್ಲಾ ನಮ್ಮ ಗುರು ಶಂಕರಲಿಂಗನೇ ಮಾಡಿಸುತ್ತಾನೆಂಬ ನಂಬಿಕೆ ನಮ್ಮದು. ನಾನು ನಿಶ್ಚಿಂತನಾಗಿದ್ದರೂ ಅದು ಹೇಗೋ ಮೂರನೆಯ ಮಗಳ ಮದುವೆಯ ಪ್ರಸ್ತಾಪವೂ ಬಂದಿತು. ಮುಹೂರ್ತವನ್ನು ಸಖರಾಯಪಟ್ಟಣದ ಗುರುಗಳ ಬಳಿ ಕೇಳಿ ನಿರ್ಧರಿಸುವುದೆಂದು ಗಂಡಿನ ಕಡೆಯವರು ತೀರ್ಮಾನಿಸಿದ್ದರು. ನನಗೆ ಅವಧೂತರ ಪರಿಚಯ ಬೇರೆ ರೀತಿಯಲ್ಲಾಗಿತ್ತು. ಅವರ ದರ್ಶನ ಮಾಡಲಾಗಿರಲಿಲ್ಲ. ಅಲ್ಲದೆ ನಮ್ಮ ತಾಯಿಯವರನ್ನು ಒಂದು ದಿನವೂ ಬಿಟ್ಟಿರಲಾರದ ಸ್ಥಿತಿಯಲ್ಲಿ ನಾವಿದ್ದಾಗ, ನನ್ನ ಶ್ರೀಮತಿಯವರಂತೂ 'ನಮಗೆ ಗುರುನಾಥರ ದರ್ಶನ ಲಾಭವಿದೆಯೋ ಇಲ್ಲವೋ' ಎಂದು ಆಗಾಗ ಕೊರಗುತ್ತಿದ್ದರು. ನಾನು 'ನೀನು ಹಿರಿಯರ ಸೇವೆ ಮಾಡು. ಅದೇ ಸರ್ವಸ್ವ. ಗುರು ತಾನೇ ದರ್ಶನ ಭಾಗ್ಯ ನೀಡುತ್ತಾನೆ' ಎಂದು ನಮ್ಮ ಮನೆಯವಳನ್ನು ಆಗಾಗ್ಗೆ ಸಂತೈಸುತ್ತಿದ್ದೆ. ಇದೀಗ ಆ ಗುರು ಕರುಣೆ ಒದಗಿ ಬಂದಿತ್ತೇನೋ... ನಮ್ಮ ಬೀಗರಾಗುವವರು ನಮಗೆ ಫೋನು ಮಾಡಿ 'ನೀವು ನಿಮ್ಮ ಮನೆಯವರು, ಹುಡುಗಿ ಕೂಡಲೇ ಬಂದು ಬಿಡಿ ಬೆಂಗಳೂರಿಗೆ. ಗುರುನಾಥರು ಅಲ್ಲೇ ಇದ್ದಾರೆ. ಕಂಡು ಮುಹೂರ್ತ ನಿರ್ಧರಿಸಿಕೊಂಡು ಬರೋಣ. ಇವತ್ತೇ ಹೊರಟು ಬನ್ನಿ' ಎಂದಾಗ ಚೆನ್ನಗಿರಿಯಲ್ಲಿ ಕೆಲಸದ ಮೇಲಿದ್ದ ನಾನು ಬೆಂಗಳೂರಿಗೆ ದೌಡಾಯಿಸಿದೆ. ಗುರುನಾಥರು ಎಲ್ಲಿದ್ದಾರೆಂದು ನಾಲ್ಕಾರು ಕಡೆ ಹುಡುಕಾಡಿದೆವು. ಭಕ್ತರಿದ್ದಲ್ಲಿ ತಾನೇ ಭಗವಂತನಿರುವುದು. ಕೊನೆಗೆ ಗುರುನಾಥರ ಶಿಷ್ಯರೊಬ್ಬರ ಮನೆಯಲ್ಲಿ ಯಾವುದೋ ಒಂದು ದೈವ ಕಾರ್ಯ ಪೂಜೆ ಇತ್ತು. ಅಲ್ಲಿದ್ದಾರೆಂದು ನಾವು ಮೂವರೂ ಅಲ್ಲಿಗೆ ಹೋದೆವು. ನಮ್ಮ ಬಂಧು ಬಳಗಗಳನ್ನು ಕರೆಯುವ ಇರಾದೆಗೆ ಬೇಡವೆಂಬ ಅಭಿಪ್ರಾಯ ಬಂತು. ಭಕ್ತರ ಮನೆಯಲ್ಲಿ ಗುರುನಾಥರ ಸುಂದರ ಮೂರುತಿಯ ಸಾಕಾರ ದರ್ಶನವಾಯಿತು. ಮೊದಲ ಬಾರಿ ಕಂಡರೂ ಅದೇನೋ ಅವ್ಯಾಜ ಪ್ರೀತಿ, ಭಕುತಿ ನನ್ನ ಮನದಲ್ಲಿ, ನನ್ನ ಮನೆಯವರಿಗೆ ಅಂತೂ ಇಷ್ಟು ದಿನ ಕೇಳಿದ ಮಹಾತ್ಮರ ದರ್ಶನ ಹೀಗೆ ಇದ್ದಕ್ಕಿದ್ದಂತೆ ಆಯಿತಲ್ಲಾ ಎಂಬ ದಿವ್ಯ ಸಮಾಧಾನ ಅವರದ್ದು. ಎಲ್ಲ ಸಮಾರಂಭದ ಕೆಲಸಗಳ ನಡುವೆ ಗುರುನಾಥರಿಗೆ ನಮ್ಮ ಪರಿಚಯ ಮಾಡಿಸಿದರು. ನಮಸ್ಕರಿಸಿದೆವು. ಆ ಮಹಾತ್ಮರ ದಿವ್ಯ ಕಂಗಳ ಆ ಮೋಹಕ ನೋಟದ ಮೋಡಿಗೆ ನಾವೆಲ್ಲಾ ನಮ್ಮನ್ನು ಅರ್ಪಿಸಿಕೊಂಡು ಬಿಟ್ಟಿದ್ದೆವು. "ಏನು ಬಂದಿದ್ದು ಏನಾಗಬೇಕು?" ಎಂದವರು ಕೇಳಿದಾಗ, ಪರಮಾತ್ಮ ಎಲ್ಲ ಬಲ್ಲ ನಿಮಗೆ ನಾವೇನು ಹೇಳುವುದಿದೆ? ಮಗಳ ಮದುವೆಗೆ ಮುಹೂರ್ತ ತಾವು ನಿರ್ಧರಿಸಬೇಕಿದೆ. ಅದಕ್ಕಾಗಿ ಎಂದಾಗ ಅವರು "ನನ್ನ ಮಾತು ಕೇಳ್ತೀರಾ. ಇವತ್ತೇ ಮದುವೆ ಆಗಿಬಿಡಲಿ" ಎಂದರು.
ಪ್ರಿಯ ಗುರು ಬಾಂಧವ ಸತ್ಸಂಗ ಪ್ರೇಮಿಗಳೇ, ಮದುವೆ ಆ ಕ್ಷಣದಲ್ಲಿ ಎಂದರೆ ನೀವೇನನ್ನುತ್ತೀರಿ? ಸಿದ್ಧರಾ? ಗುರು ನುಡಿಗೆ ಎದುರಾಡುವುದುಂಟೆ. ಮುಂದೇನಾಯಿತು ತಿಳಿಯಲು ದಯಮಾಡಿ ನಾಳಿನ ಸತ್ಸಂಗಕ್ಕೆ ತಪ್ಪದೆ ಬನ್ನಿ. ಗುರುವಿನ ಪರೀಕ್ಷೆಗಳು ವಿಚಿತ್ರವಾಗಿರುತ್ತದೆ. ಗುರುವೆಂದು ನಂಬಿದ ಮೇಲೆ ನಮ್ಮ ಉದ್ಧಾರದ ಹೊಣೆ ಅವನದೆಂದು ಎಲ್ಲ ಅವನಿಗೆ ಅರ್ಪಿಸಿದರೆ ನಾವು ನಿಶ್ಚಿಂತರಾಗಿ ಬಾಳಬಹುದು. 'ನಾನು ಎಂಬುದಳಿದು ಗುರು ಚರಣದಲ್ಲಿ ನಿರಂತರ ಶುದ್ಧ ಭಾವ ಬಂದಾಗ ಮಾತ್ರ ಇದು ಸಾಧ್ಯ'.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment